ಆ್ಯಪ್ನಗರ

ರಿಯಲ್ ಲೈಫ್‌ನಲ್ಲಿ ಮೊಬೈಲ್‌ನಿಂದ ಸಿಕ್ಕಿಹಾಕಿಕೊಂಡ 'ಮಂಗಳ ಗೌರಿ ಮದುವೆ' ಧಾರಾವಾಹಿ ಹೀರೋಯಿನ್: ತುಂಬ ಮಾಡರ್ನ್‌!

ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರ ರಿಯಲ್ ಲೈಫ್ ವಿಚಾರಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

Vijaya Karnataka Web 12 Apr 2020, 1:57 pm
(ಪದ್ಮಶ್ರೀ ಭಟ್)
Vijaya Karnataka Web interview mangala gowri serial heroine name kavyashree family education
ರಿಯಲ್ ಲೈಫ್‌ನಲ್ಲಿ ಮೊಬೈಲ್‌ನಿಂದ ಸಿಕ್ಕಿಹಾಕಿಕೊಂಡ 'ಮಂಗಳ ಗೌರಿ ಮದುವೆ' ಧಾರಾವಾಹಿ ಹೀರೋಯಿನ್: ತುಂಬ ಮಾಡರ್ನ್‌!


ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಂಗಳ ಗೌರಿ ಮದುವೆ' ಧಾರಾವಾಹಿ ತುಂಬ ಜನಪ್ರಿಯ ಧಾರಾವಾಹಿ. ಹೆಚ್ಚ ಕಡಿಮೆ 'ಪುಟ್ಟ ಗೌರಿ ಮದುವೆ' ಧಾರಾವಾಹಿ ರೀತಿಯಲ್ಲಿ ಈ ಧಾರಾವಾಹಿ ಬಂದರೂ ಕೂಡ ಸ್ವಲ್ಪ ವಿಭಿನ್ನತೆಯಿಂದ ಕೂಡಿದ್ದು, ಜನರ ಮೆಚ್ಚುಗೆ ಗಳಿಸಿದೆ. ಇದೊಂದು ಸ್ತ್ರೀ ಪ್ರಧಾನ ಧಾರಾವಾಹಿ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಖ್ಯಾತ ನಿರ್ದೇಶಕ ಕೆ.ಎಸ್‌.ರಾಮ್‌ಜೀ ಇದರ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಂಗಳಗೌರಿ ಪಾತ್ರ ಮಾಡುತ್ತಿರುವವರು ಕಾವ್ಯಶ್ರೀ ಗೌಡ. ತೆರೆ ಮೇಲೆ ಸದಾ ಸೀರೆಯುಟ್ಟುಕೊಂಡು ಸಂಪ್ರದಾಯಬದ್ಧ ಹೆಣ್ಣಿನಂತೆ ಕಾಣುವ, ತಾಳ್ಮೆ, ಸಹನೆ ಹೊಂದಿರುವ, ಗಂಡನನ್ನೇ ಸರ್ವಸ್ವ ಎಂದುಕೊಂಡಿರುವ ಮಂಗಳ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರು ಕಾವ್ಯಶ್ರೀ. ತೆರೆ ಮೇಲಿನ ಮಂಗಳಾಗೂ, ಕಾವ್ಯಶ್ರೀಗೂ ತುಂಬ ವ್ಯತ್ಯಾಸವಿದೆ. ನಿಜ ಹೇಳಬೇಕು ಎಂದರೆ ಮಂಗಳ ಮತ್ತು ಕಾವ್ಯಶ್ರೀ ಉತ್ತರ-ದಕ್ಷಿಣ ಇದ್ದಂತೆ. ಮಂಗಳ ನಿಜ ಜೀವನದಲ್ಲಿ ಹೇಗಿರ್ತಾರೆ ಎಂಬ ಕುತೂಹಲ ಹಲವರಿಗಿರಬಹುದು. ಇವರ ಊರು, ಕುಟುಂಬ, ಶಿಕ್ಷಣ, ಧಾರಾವಾಹಿ, ಸಿನಿಮಾ ಕನಸು, ಬ್ಯೂಟಿ ಟಿಪ್ಸ್, ಒಟ್ಟಾರೆ ಜೀವನದ ಬಗ್ಗೆ ಕಾವಶ್ರೀ 'ವಿಜಯ ಕರ್ನಾಟಕ'ದ ಜೊತೆಗೆ ಮಾತನಾಡಿದ್ದಾರೆ.

ನಟನೆ ಕಲಿಯದೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದು ಹೇಗೆ ಕಾವ್ಯಶ್ರೀ?

ಕಾವಶ್ರೀ ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಮೊದಲಿನಿಂದಲೂ ನಟನೆ ಬಗ್ಗೆ ಕಾವ್ಯಶ್ರೀಗೆ ಆಸಕ್ತಿಯಿತ್ತು. ಧಾರಾವಾಹಿಗೆ ಬರುವ ಮುನ್ನ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಕಾವ್ಯಶ್ರೀ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಓದುತ್ತಿರುವಾಗಲೇ ನಿರೂಪಣೆ ಕೆಲಸ ಮಾಡುತ್ತಿದ್ದರು. ಡಿಗ್ರಿ ಮುಗಿಯುತ್ತಿದ್ದಂತೆ ಧಾರಾವಾಹಿಗಳಿಗೆ ಆಡಿಷನ್ಸ್ ನೀಡುತ್ತಿದ್ದರು. ಆಗ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡಿದ್ದ ಕಾವ್ಯಶ್ರೀಗೆ 'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುವ ಅವಕಾಶವನ್ನು ನೀಡಿದ್ದವರು ರಾಮ್‌ಜೀ. ಮುಂದೆ ಏನಾಗ್ತೀಯಾ? ಅಂತ ಪ್ರಶ್ನೆ ಮಾಡಿದರೆ ಕಾವ್ಯಶ್ರೀ, ಹೀರೋಯಿನ್ ಆಗ್ತೀನಿ ಅಂತ ಹೇಳುತ್ತಿದ್ದರಂತೆ. ಇವರಿಗೆ ಚಿಕ್ಕವಯಸ್ಸಿನಿಂದಲೂ ನಟಿಯಾಗಬೇಕೆಂಬ ಆಸೆ ಇತ್ತು. ಹೀಗಾಗಿ ಅವರು ಹೆಚ್ಚು ಟಿವಿ ವೀಕ್ಷಿಸುತ್ತಿದ್ದರಂತೆ. ಟಿವಿ ನೋಡುತ್ತಲೇ ನಟನೆ ಕಲಿತವರು ಕಾವ್ಯಶ್ರೀ.

'ಮಂಗಳ ಗೌರಿ ಮದುವೆ' ಧಾರಾವಾಹಿ ಹೀರೋಯಿನ್ ರಿಯಲ್ ಲೈಫ್ ಸ್ಟೋರಿ ಇದು

ಮಂಗಳಾ ಸಿಕ್ಕಾಪಟ್ಟೆ ಸಹನಾಮಯಿ ಅನ್ನೋ ವಿಚಾರಕ್ಕೆ ಕಾವ್ಯಶ್ರೀ ಹೇಳೋದೇನು?

ಧಾರಾವಾಹಿಯಲ್ಲಿ ಸೀರೆ ಹಾಕಿಕೊಂಡು ಸದಾ ಅಳುವ ಕಾವ್ಯಶ್ರೀ ನಿಜಜೀವನದಲ್ಲಿ ಸದಾ ನಗುತ್ತಿರುತ್ತಾರೆ. ಯಾರಾದರೂ ಬೇಸರ ಮಾಡಿದರೆ ಅವರಿಂದ ದೂರವಾಗುವ ಕಾವ್ಯ, ಅಳೋದಿಲ್ವಂತೆ. ಹೊರಗಡೆ ಓಡಾಡುವಾಗ ವೀಕ್ಷಕರು ಸಿಕ್ಕಿ ಗುರುತಿಸಿದರೆ 'ಪ್ಲೀಸ್ ಅಳ್ಬೇಡಮ್ಮ, ನಮಗೆ ಬೇಜಾರಾಗತ್ತೆ' ಅಂತ ಹೇಳ್ತಾರಂತೆ. ಹೀರೋಯಿನ್ ಆಗ್ಬೇಕು ಎನ್ನುವ ಆಸೆಯಿತ್ತು. ಆದರೆ ಇಷ್ಟುಬೇಗ ಆಗ್ತೀನಿ ಅಂತ ಗೊತ್ತಿರಲಿಲ್ಲ ಅಂತ ಖುಷಿ ವ್ಯಕ್ತಪಡಿಸುತ್ತಾರೆ ಕಾವ್ಯಶ್ರೀ. ಮಂಗಳಾ ಯಾರು ಏನೇ ಮಾಡಿದ್ರೂ ಸಹನಾಮಯಿ ಆಗಿ ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ. ಇದರ ಬಗ್ಗೆ ಮಾತನಾಡಿದ ಕಾವ್ಯ 'ಒಮ್ಮೊಮ್ಮೆ ನನಗೂ ಕೂಡ ಮಂಗಳಾ ತಾಳ್ಮೆ ಆಶ್ಚರ್ಯವನ್ನುಂಟು ಮಾಡುತ್ತದೆ, ಆದರೆ ನಾವು ಕೆಲವೊಮ್ಮೆ ತಾಳ್ಮೆಯಿಂದ ಇರೋದರಿಂದ ಸಮಸ್ಯೆ ದೊಡ್ಡದಾಗದೆ ಅಲ್ಲಿಗೆ ಮುಗಿಯುವ ಸಾಧ್ಯತೆ ಇರುತ್ತದೆ, ಮಂಗಳಾ ಎಲ್ಲ ಟೈಮ್‌ನಲ್ಲೂ ಸುಮ್ಮನಿರೋದಿಲ್ಲ, ಅವಳು ಸಿಡಿದೇಳುತ್ತಾಳೆ ಎಂಬುದನ್ನು ಕೂಡ ನಾವು ಧಾರಾವಾಹಿಯಲ್ಲಿ ತೋರಿಸಿದ್ದೇವೆ. ಈ ಪಾತ್ರದಿಂದ ಕಲಿಯೋದು ತುಂಬ ಇದೆ' ಎನ್ನುತ್ತಾರೆ.

'ಪುಟ್ಟಗೌರಿ ಮದುವೆ' ಮತ್ತು 'ಮಂಗಳಗೌರಿ ಮದುವೆ' ನಡುವೆ ನಿಮಗೇನಾದರೂ ವ್ಯತ್ಯಾಸ ಕಾಣಿಸ್ತಾ?

ಸೆಲೆಬ್ರಿಟಿಯಾದ್ಮೇಲೆ ಕಾವ್ಯಶ್ರೀಗೆ ಬೇಸರ ತರಿಸುವ ವಿಚಾರ ಏನು?

'ಎಲ್ಲ ಸೀನ್‌ನಲ್ಲೂ ನಾನೇ ಇರ್ತೀನಿ. ನನಗೆ ಟೈಮ್‌ ಸಿಗೋದೇ ಇಲ್ಲ. ಧಾರಾವಾಹಿ ಸೆಟ್‌ನಲ್ಲಿಯೂ ಮಾತನಾಡೋಕೆ ಒಮ್ಮೊಮ್ಮೆ ಅವಕಾಶ ಸಿಗೋದೆ ಇಲ್ಲ. ನಟಿಯಾದಮೇಲೆ ಬದುಕು ತುಂಬ ಬದಲಾಗಿದೆ. ಸ್ನೇಹಿತರು, ಸಂಬಂಧಿಕರು ಮಾತನಾಡುವ ಶೈಲಿ ಬದಲಾಗಿದೆ. ಮೇಕಪ್ ಇಲ್ಲದೆ ಹೊರಗಡೆ ಹೋದ್ರೆ ಜನರು ಟ್ರೋಲ್ ಮಾಡ್ತಾರೆ ಎಂಬ ಭಯ ನನಗಿಲ್ಲ, ನಾನು ನ್ಯಾಚುರಲ್ ಆಗಿರೋಕೆ ಇಷ್ಟಪಡ್ತೀನಿ.ಸಭೆ-ಸಮಾರಂಭಗಳಿಗೆ ಹೋಗಲು ಟೈಮ್ ಸಿಗೋದಿಲ್ಲ. ಹೊರಗಡೆ ಸುಮ್ಮನೆ ಓಡಾಡೋದಿಕ್ಕೆ ಆಗೋದಿಲ್ಲ. ಬೀದಿ ಬದಿಯಲ್ಲಿ ನಿಂತು ಪಾನಿಪುರಿ ತಿನ್ನೋಕಾಗಲ್ಲ, ಶಾಪಿಂಗ್ ಮಾಡೋಕೆ ಆಗಲ್ಲ, ಒಮ್ಮೆ ಮೆಟ್ರೋದಲ್ಲಿ ಹೋಗಿದ್ದೆ. ಜನರು ಗುರುತಿಸಿ ಮಾತನಾಡಿಸಿದ್ರು. ಸಾಮಾನ್ಯರಂತೆ ಇರೋದಿಕ್ಕೆ ನಾನು ಇಷ್ಟಪಡ್ತೀನಿ. ಸೆಲೆಬ್ರಿಟಿ ಅಂತ ತಲೆಯಲ್ಲಿ ಬಂದ್ರೆ ನಮ್ಮ ನಟನೆ ಹೊರಗೆ ಬರೋದಿಲ್ಲ ಅನ್ನೋದು ನನ್ನ ಅಭಿಪ್ರಾಯ' ಎನ್ನುತ್ತಾರೆ ಕಾವ್ಯಶ್ರೀ.

ಮೊಬೈಲ್‌ ವಿಚಾರಕ್ಕೆ ಸಿಕ್ಕಿ ಹಾಕಿಕೊಂಡ ಘಟನೆ ಏನು?

'ಧಾರಾವಾಹಿಯಲ್ಲಿ ಮೊಬೈಲ್ ಬಳಸ್ತೀನಿ, ಹೊರಗಡೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋದ್ರು ಕೂಡ ನನ್ನ ಮೊಬೈಲ್‌ ನೋಡಿ ನಾನು ಮಂಗಳಗೌರಿ ಅಂತ ಜನರು ಕಂಡು ಹಿಡಿಯುತ್ತಾರೆ. ಅಷ್ಟೊಂದೆಲ್ಲ ನಮ್ಮನ್ನು ಗುರುತಿಸುತ್ತಾರೆ ಅನ್ನೋದೆ ಖುಷಿ. ನಾನು ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ, ಆದರೆ ರಿಯಲ್ ಲೈಫ್‌ಲ್ಲಿ ನಾನು ತುಂಬಾನೇ ಮಾಡರ್ನ್. ನನಗೆ ಈಗ ಬರುವ ಆಫರ್‌ಗಳೆಲ್ಲವೂ ಹಳ್ಳಿ ಹುಡುಗಿ ಪಾತ್ರಗಳು. ಆದರೆ ಒಂದೇ ರೀತಿಯ ಪಾತ್ರ ಮಾಡೋದಕ್ಕೆ ನಾನು ಇಷ್ಟಪಡೋದಿಲ್ಲ. ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡು ನನ್ನ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂಬ ದೊಡ್ಡ ಆಸೆಯಿದೆ. ಮಂಗಳ ಗೌರಿ ಮತ್ತು ಪುಟ್ಟಗೌರಿ ಪಾತ್ರಗಳು ನೋಡೋದಕ್ಕೆ ಒಂದೇ ರೀತಿ ಅನಿಸಿದರೂ ಕೂಡ ಇವೆರಡು ಬೇರೆ ಬೇರೆ ಪಾತ್ರಗಳು' ಅಂತಾರೆ ಕಾವ್ಯಶ್ರೀ.

ಮಾಡರ್ನ್ ಫೋಟೋಶೂಟ್ , ಪಾತ್ರ ಇಷ್ಟಪಡುವ ಕಾವ್ಯಶ್ರೀ

'ಅವಕಾಶ ಸಿಕ್ಕರೆ, ಒಳ್ಳೆಯ ಪಾತ್ರ ಮಾಡಿಕೊಂಡರೆ ನಾನು ಸಿನಿಮಾದಲ್ಲಿ ನಟಿಸುತ್ತೇನೆ. ಸಿನಿಮಾ ಮಾಡಿದ್ರೂ ಕೂಡ ಧಾರಾವಾಹಿಯಲ್ಲಿ ಅಭಿನಯಿಸೋದು ಮಾತ್ರ ಬಿಡೋದಿಲ್ಲ. ಸಿನಿಮಾ ರಿಲೀಸ್ ಆದಾಗ ಜನರು ಥೀಯೇಟರ್‌ನಲ್ಲಿ ಬಂದು ಒಮ್ಮೆ ಮಾತ್ರ ನೋಡೋದಾಗತ್ತೆ, ಮೊಬೈಲ್‌ನಲ್ಲೋ ಅಥವಾ ಟಿವಿಯಲ್ಲಿ ಆಗಾಗ ಸಿನಿಮಾಗಳು ಬರೋದುಂಟು. ಆದರೆ ಧಾರಾವಾಹಿಯಲ್ಲಿ ನಟಿಸಿದರೆ ದಿನನಿತ್ಯ ನಾವು ಮನೆ ಮನೆಯ ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆ, ಜನರಿಗೆ ಹತ್ತಿರವಾಗುತ್ತೇವೆ' ಎಂದು ಹೇಳುತ್ತಾರೆ ಕಾವ್ಯಶ್ರೀ. ಇತ್ತೀಚಿನ ದಿನಗಳಲ್ಲಿ ಟ್ರೆಡಿಶನಲ್ ಮತ್ತು ಮಾಡರ್ನ್ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಫೋಟೋಶೂಟ್ ಮಾಡಿಸುತ್ತಿದ್ದಾರೆ ಕಾವ್ಯ. ಇನ್‌ಸ್ಟಾಗ್ರಾಮ್‌ನಲ್ಲಿ ಇವರ ಫೋಟೋಗಳಿಗೆ ಹೆಚ್ಚು ಮೆಚ್ಚುಗೆ ಸಿಕ್ಕಿವೆ.

ಕಾವ್ಯಶ್ರೀ ಸೌಂದರ್ಯ ವೃದ್ಧಿಗೋಸ್ಕರ ಕೆಮಿಕಲ್ ಪ್ರಾಡಕ್ಟ್ ಬಳಸೋದಿಲ್ಲ, ಬ್ಯೂಟಿ ಪಾರ್ಲರ್‌ಗೆ ಹೋಗೋದಿಲ್ಲ. ಕಡಲೆಹಿಟ್ಟು, ಅರಿಶಿಷಣ, ಟೋಮ್ಯಾಟೋದಂತಹ ವಸ್ತುಗಳನ್ನು ತ್ವಚೆಯ ಕಾಂತಿಗೋಸ್ಕರ ಬಳಸುತ್ತಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಹೀರೋ ಮತ್ತು ಹೀರೋಯಿನ್!

View this post on Instagram #mangalagowri #puttagowrimadhuve A post shared by Kavyashree Gowda (@kavyashree_gowda_official) on Mar 6, 2019 at 11:17pm PST

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ