ಆ್ಯಪ್ನಗರ

ಭಕ್ತಿಗಷ್ಟೇ ಒಲಿಯುವ ಇವಳೇ ವೀಣಾ ಪಾಣಿ

ಸಾಕಷ್ಟು ಧಾರಾವಾಹಿಗಳ ಮೂಲಕ ಜನ ಮನ ಗೆದ್ದಿರುವ ಕಲರ್ಸ್‌ ಸೂಪರ್‌ ಈಗ 'ಇವಳೇ ವೀಣಾ ಪಾಣಿ' ಎಂಬ ಹೊಸ ಸೀರಿಯಲ್‌ ಅನ್ನು ಆರಂಭಿಸುತ್ತಿದೆ.

Vijaya Karnataka 15 Jun 2018, 9:23 am
*ಹರೀಶ್‌ ಬಸವರಾಜ್‌
Vijaya Karnataka Web varshika


ಶನಿ, ಅಗ್ನಿ ಸಾಕ್ಷಿ ಸೇರಿ ಸಾಕಷ್ಟು ಜನಪ್ರಿಯ ಸೀರಿಯಲ್‌ಗಳ ಮೂಲಕ ಹೆಸರು ಮಾಡಿರುವ ಕಲರ್ಸ್‌ ಕನ್ನಡ ವಾಹಿನಿ, ತನ್ನ ಸೋದರ ವಾಹಿನಿಯಾದ ಕಲರ್ಸ್‌ ಸೂಪರ್‌ ಮೂಲಕ ಇದೀಗ 'ಇವಳೇ ವೀಣಾ ಪಾಣಿ' ಎಂಬ ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದೆ.

ನಟ ಹಾಗೂ ಬರಹಗಾರ ಸುಜಯ್‌ ಹುಣಸೂರು 'ಇವಳೇ ವೀಣಾ ಪಾಣಿ' ಸೀರಿಯಲ್‌ನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊತ್ತ ಮೊದಲಿಗೆ ಅವರು ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. 'ಈ ಸೀರಿಯಲ್‌ ಕರ್ಮಗಳ ಫಿಲಾಸಪಿ ಮೇಲೆ ನಡೆಯುತ್ತದೆ. ಕೆಟ್ಟದನ್ನು ಮಾಡಿದವರಿಗೆ, ಕೆಟ್ಟದಾಗುತ್ತದೆ. ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯದಾಗುತ್ತದೆ ಎಂಬ ಅಂಶ ಇಲ್ಲಿದೆ' ಅಂತಾರೆ ನಿರ್ದೇಶಕ ಸುಜಯ್‌ ಹುಣಸೂರು.

ರಾಜೀವ್‌ ದೀಕ್ಷಿತ್‌ ಎಂಬ ಪ್ರಖಾಂಡ ಪಂಡಿತ ಬ್ರಹ್ಮ ಪುರಿ ಎಂಬ ಊರಿನಲ್ಲಿರುತ್ತಾನೆ. ಅವನಿಗೆ ಎಲ್ಲವೂ ಗೊತ್ತಿರುತ್ತದೆ. ಜತೆಗೆ ದುರ್ಬುದ್ಧಿಯೂ ಇರುತ್ತದೆ. ಇದೇ ಊರಿನಲ್ಲಿ ವಾಗ್ದೇವಿ ಎನ್ನುವ ಮಹಿಳೆಗೆ ಶಾರದೆಯಿಂದ ಆರು ವರಗಳಿರುವ ವೀಣೆಯೊಂದು ಒಲಿದಿರುತ್ತದೆ. ಆ ವೀಣೆಯನ್ನು ನುಡಿಸುತ್ತಾ, ಏನಾದರೂ ವರ ಕೇಳಿದರೆ ಅದು ಸಿಗುತ್ತಿರುತ್ತದೆ. ಇಂತಹ ಒಂದು ಅಪರೂಪದ ವೀಣೆಯನ್ನು ಕುತಂತ್ರದಿಂದ ಪಡೆದು, ಆ ವರ ವೀಣೆಯನ್ನು ನುಡಿಸಲು ಪ್ರಯತ್ನ ಪಡುತ್ತಾನೆ ರಾಜೀವ್‌ ದೀಕ್ಷಿತ್‌. ಆದರೆ ಅದು ಕಲ್ಲಾಗುತ್ತದೆ. ಕಾರಣ ಶಾರದಾ ಪದಕವಿಲ್ಲದೇ ಆ ವೀಣೆಯಿಂದ ಏನನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ರಾಜೀವ್‌ ದೀಕ್ಷಿತ್‌ ಶಾರದಾ ಪದಕವನ್ನು ಪಡೆಯಲು, ವಾಗ್ದೇವಿಯ ಹಿಂದೆ ಬೀಳುತ್ತಾನೆ. ವಾಗ್ದೇವಿ ಆತನಿಂದ ತಪ್ಪಿಸಿಕೊಳ್ಳಲು ತನ್ನ ಆರು ತಿಂಗಳ ಮಗುವಿನ ಕುತ್ತಿಗೆಗೆ ಆ ಪದಕವನ್ನು ಹಾಕಿ, ನದಿಯಲ್ಲಿ ತೇಲಿ ಬಿಡುತ್ತಾಳೆ. ಅಲ್ಲಿಂದ ಆರಂಭವಾಗುವ ಶಾರಾದ ಪದಕದ ಹುಡುಕಾಟ, ಕಳೆದ 20 ವರ್ಷಗಳಿಂದ ನಡಯುತ್ತಲೇ ಇದೆ.

ಈ ನಡುವೆ ಆ ಮಗು ಭಕ್ತಿ ಎಂಬ ಹೆಸರಿನಲ್ಲಿ ಬೆಳದು ದೊಡ್ಡವಳಾಗಿರುತ್ತಾಳೆ, ಇಷ್ಟಾದರೂ ಆ ಶಾರಾದ ಪದಕವನ್ನು ಹುಡುಕುವ ಕೆಲಸವನ್ನು ರಾಜೀವ್‌ ದೀಕ್ಷೀತ್‌ ಬಿಟ್ಟಿರುವುದಿಲ್ಲ. ಈ ಪದಕದ ಹುಡುಕಾಟವೇ ಈ ಸೀರಿಯಲ್‌ನ ಚಿತ್ರಕಥೆಯಾಗಿದೆ.

ವಿಪರ್ಯಾಸ ಎಂದರೆ ದುಷ್ಟ ರಾಜೀವ್‌ ದೀಕ್ಷಿತರ ಪುತ್ರ ಮಯೂರ, ವಾಗ್ದೇವಿಯ ಪುತ್ರಿ ಭಕ್ತಿಯನ್ನು ಮೆಚ್ಚಿಕೊಂಡಿರುತ್ತಾನೆ. ಇಂತಹ ಹಲವು ಟ್ವಿಸ್ಟ್‌ಗಳ ನಡುವೆ ಇವಳೇ ವೀಣಾ ಪಾಣಿ ಧಾರಾವಾಹಿ ನಡೆಯುತ್ತದೆ.

ಈ ಸೀರಿಯಲ್‌ನಲ್ಲಿ ವರ್ಷಿಕಾ ಎಂಬ ಯುವತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜತೆ ಸಂಭ್ರಮ, ಎಂ ಎನ್‌ ಜಯಂತ್‌ , ಶ್ರುತಿ ನಾಯಕ್‌ ನಟಿಸುತ್ತಿದ್ದಾರೆ. ಆರವ್‌ ಸೂರ್ಯ ನಾಯಕರಾಗಿದ್ದಾರೆ. ರಾಜೀವ್‌ ದೀಕ್ಷೀತ ಪಾತ್ರದಲ್ಲಿ ಭಾಸ್ಕರ್‌ ಎಂಬ ಹೊಸ ಕಲಾವಿದರು ನಟಿಸುತ್ತಿದ್ದಾರೆ.

ಈ ಇವಳೇ ವೀಣಾ ಪಾಣಿ ಸೀರಿಯಲ್‌ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ ಸೂಪರ್‌ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಕನ್ನಡದ ಸೀರಿಯಲ್‌ಗಳಲ್ಲಿ ಇದು ಅಪರೂಪದ ಕತೆ. ಜತೆಗೆ ಕರ್ನಾಟಕದ ನಾನಾ ಭಾಗಗಳಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ. ಆ ಸುಂದರ ತಾಣಗಳ ವೈಭವವನ್ನು ಈ ಸೀರಿಯಲ್‌ನಲ್ಲಿ ಕಾಣಬಹುದು.
ಸುಜಯ್‌ ಹುಣಸೂರು, ಕಥೆಗಾರ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ