ಆ್ಯಪ್ನಗರ

Bizarre Incident : ಹಲ್ಲುಜ್ಜುವಾಗ ಆಕಸ್ಮಿಕವಾಗಿ ವ್ಯಕ್ತಿಯ ಹೊಟ್ಟೆ ಸೇರಿದ ಟೂತ್‌ಬ್ರಶ್!

ಇದೊಂದು ವಿಲಕ್ಷಣ ಘಟನೆ. ವ್ಯಕ್ತಿಯೊಬ್ಬರ ಹೊಟ್ಟೆಯಿಂದ ವೈದ್ಯರು ಟೂತ್‌ಬ್ರಶ್ ಹೊರತೆಗೆದಿದ್ದು, ಈ ಘಟನೆಯ ಬಗ್ಗೆ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ.

Vijaya Karnataka Web 23 Sep 2020, 10:49 am
2020ನೇ ವರ್ಷ ಬಹಳ ಚಿತ್ರ ವಿಚಿತ್ರ ಘಟನೆಗಳಿಗೆಲ್ಲಾ ಸಾಕ್ಷಿಯಾಗುತ್ತಿದೆ. ಈಗಾಗಲೇ ಕೊರೊನಾ ಆರ್ಭಟದಿಂದ ನಲುಗಿರುವ ಜನರಿಗೆ ಒಂದಷ್ಟು ವಿಲಕ್ಷಣ ಘಟನೆಗಳು ಇನ್ನಷ್ಟು ಅಚ್ಚರಿ ಮೂಡಿಸುತ್ತಿವೆ. ಹೀಗೆ ಒಂದೇ ಸಲಕ್ಕೆ ಜನರನ್ನು ದಿಗಿಲುಗೊಳಿಸುವಂತಹ ಅನೇಕ ಘಟನೆಗಳ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಇದೀಗ ಇದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಅದೇನೆಂದರೆ, ಇಲ್ಲೊಂದು ಕಡೆ ವೈದ್ಯರ ತಂಡ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಹಲ್ಲುಜ್ಜುವ ಬ್ರಶ್ ಹೊರತೆಗೆದಿದ್ದಾರೆ...!
Vijaya Karnataka Web Image by Bruno Germany from Pixabay
| Representative image | Image by Bruno Germany from Pixabay


ಇದು ನಡೆದಿರುವುದು ಅರುಣಾಚಲ ಪ್ರದೇಶದಲ್ಲಿ. ಇಲ್ಲಿ ವ್ಯಕ್ತಿಯೊಬ್ಬರ ಹೊಟ್ಟೆಯಿಂದ 19 ಸೆಂಟಿಮೀಟರ್ ಉದ್ದದ ಹಲ್ಲುಜ್ಜುವ ಬ್ರಶನ್ನು ವೈದ್ಯರ ತಂಡ ಯಶಸ್ವಿಯಾಗಿ ಹೊರಗೆ ತೆಗೆದಿದೆ. ರೋಯಿಂಗ್ ಲೋವರ್ ಡಿಬಾಂಗ್ ಕಣಿವೆಯ ನಿವಾಸಿ 39 ವರ್ಷದ ವ್ಯಕ್ತಿ ಸೆಪ್ಟೆಂಬರ್ 15ರಂದು ಹಲ್ಲುಜ್ಜುವಾಗ ಆಕಸ್ಮಿಕವಾಗಿ ಟೂತ್‌ಬ್ರಶ್ ಅವರ ಹೊಟ್ಟೆ ಸೇರಿತ್ತು. ಗಂಟಲಿನ ಭಾಗವನ್ನು ಸ್ವಚ್ಛಗೊಳಿಸಲು ಯತ್ನಿಸುವಾಗ ಈ ಬ್ರಶ್ ಹೊಟ್ಟೆಯೊಳಗೆ ಜಾರಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಮನೆಯವರು ತಕ್ಷಣ ಇವರನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು.

Also Read : 38 ವರ್ಷಗಳ ಬಳಿಕ ಹೆತ್ತವರ ಮಡಿಲು ಸೇರಿದ 40 ವರ್ಷದ ಮಗ! : ಇದು ಹೃದಯವನ್ನೇ ಕರಗಿಸುವ ಕ್ಷಣ

ಸ್ಥಳೀಯ ಕ್ಲಿನಿಕ್‌ನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಈ ವ್ಯಕ್ತಿಯನ್ನು ಬಾಕಿನ್ ಪರ್ಟಿನ್ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಆರಂಭದಲ್ಲಿ ಎಲ್ಲರೂ ಈ ಬ್ರಶ್ ಅನ್ನನಾಳದಲ್ಲಿ ಸಿಕ್ಕಿಕೊಂಡಿರಬಹುದು ಎಂದುಕೊಂಡಿದ್ದರು. ಆದರೆ, ಬಾಕಿನ್ ಪರ್ಟಿನ್ ಆಸ್ಪತ್ರೆಯ ವೈದ್ಯರು ಎಕ್ಸ್‌ರೇ ಸೇರಿದಂತೆ ಇನ್ನಿತರ ಪರೀಕ್ಷೆ ನಡೆಸಿದಾಗ ಈ ವ್ಯಕ್ತಿಯ ಅನ್ನನಾಳದಲ್ಲಿ ಬ್ರಶ್ ಕಾಣಸಿಗಲಿಲ್ಲ. ಈ ವೇಳೆ, ಆಸ್ಪತ್ರೆಯ ಪ್ರಮುಖ ಶಸ್ತ್ರಚಿಕಿತ್ಸಕ ಡಾ. ಬೊಮ್ನಿ ತಯೆಂಗ್ ಅವರನ್ನು ಸಂಪರ್ಕಿಸಿದಾಗ ಟೂತ್‌ಬ್ರಶ್ ಹೊಟ್ಟೆ ಸೇರಿರುವ ಸಾಧ್ಯತೆ ಇದ್ದು, ಲ್ಯಾಪರೊಟಮಿ ಪರೀಕ್ಷೆಗಾಗಿ ರೋಗಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವಂತೆ ಸೂಚಿಸಿದ್ದರು.

Also Read : ಹೆದ್ದಾರಿಯಲ್ಲಿ ಕಾರಿನ ಚಕ್ರದಲ್ಲಿ ಸುತ್ತಿಕೊಂಡ 14 ಅಡಿ ಉದ್ದದ ಹೆಬ್ಬಾವು! : ವಿಡಿಯೋ ವೈರಲ್

ಬ್ರಶ್ ನುಂಗಿದ ನಂತರ ಈ ವ್ಯಕ್ತಿಗೆ ಯಾವುದೇ ದೊಡ್ಡ ಪ್ರಮಾಣದ ನೋವು ಕಾಣಿಸಿಕೊಂಡಿರಲಿಲ್ಲ. ಆದರೆ, ಹೊಟ್ಟೆಯಲ್ಲಿ ಸಣ್ಣಮಟ್ಟಿನ ಸಂಕಟವಾದಂತಹ ಅನುಭವವಾಗುತ್ತಿತ್ತಷ್ಟೇ. ಇದಾದ ಬಳಿಕ ವೈದ್ಯರ ತಂಡ ಸಾಮಾನ್ಯ ಅರಿವಳಿಕೆ ನೀಡಿ ಸಣ್ಣ ಶಸ್ತ್ರಚಿಕಿತ್ಸೆ ಮೂಲಕ 24 ಗಂಟೆಯೊಳಗೆ ಟೂತ್‌ಬ್ರಶ್ ಅನ್ನು ವ್ಯಕ್ತಿಯ ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 30ರಿಂದ 35 ನಿಮಿಷ ಹಿಡಿದಿತ್ತು ಎಂದು ತಜ್ಞ ವೈದ್ಯರಾದ ಡಾ. ಬೊಮ್ನಿ ತಯೆಂಗ್ ತಿಳಿಸಿದ್ದಾಗಿ `ಅರುಣಾಚಲ್ 24' ವರದಿ ಮಾಡಿದೆ.

Also Read : ಬೋರ್‌ವೆಲ್‌ನಿಂದ ನೀರು ಕುಡಿಯುವ ಎಮ್ಮೆ : ಬೆರಗು ಮೂಡಿಸುತ್ತದೆ ಈ ಜಾಣತನ

ಜೊತೆಗೆ, ಯಾರಾದರೂ ಟೂತ್‌ಬ್ರಶ್‌ ಅನ್ನೂ ನುಂಗಬಹುದು ಎಂಬ ವಿಷಯ ಕೇಳಿ ನನಗೂ ಅಚ್ಚರಿಯಾಗಿತು ಎಂದೂ ಡಾ ತಯೆಂಗ್ ಹೇಳಿದ್ದಾರೆ. ಸದ್ಯ ಈ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದಲೂ ಬಿಡುಗಡೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ