ಆ್ಯಪ್ನಗರ

ಝೂಗೆ ಬರುವವರಿಗೆ ಕೆಟ್ಟದಾಗಿ ಬೈಯುವ ಗಿಳಿಗಳು! : ಮೃಗಾಲಯದವರಿಗೆ ಶುರು ಹೊಸ ಪೀಕಲಾಟ!

ಯುಕೆಯ ಮೃಗಾಲಯದ ಅಧಿಕಾರಿಗಳಿಗೆ ಈಗ ಗಿಳಿಗಳೇ ದೊಡ್ಡ ಟೆನ್ಷನ್ ತಂದಿವೆ. ಹೀಗಾಗಿ, ಐದು ಗಿಳಿಗಳನ್ನು ಮತ್ತೆ ಐಸೋಲೇಷನ್‌ನಲ್ಲಿಡಲಾಗಿದೆ...!

Vijaya Karnataka Web 29 Sep 2020, 4:46 pm
ಎರಡು ಗಿಳಿಗಳ ನೀತಿ ಕತೆಯನ್ನು ನೀವು ಶಾಲಾ ದಿನಗಳಲ್ಲಿ ಕೇಳಿರಬಹುದು... ಎರಡು ಗಿಳಿ ಮರಿಗಳಲ್ಲಿ ಒಂದನ್ನು ಬೇಟೆಗಾರನೂ ಇನ್ನೊಂದನ್ನು ಸಂತನೂ ಕೊಂಡೊಯ್ದು ಸಾಕುತ್ತಾರೆ. ಇದಲ್ಲಿ ಬೇಟೆಗಾರನ ಬಳಿ ಇದ್ದ ಗಿಳಿ ಬೆಳೆದು ದೊಡ್ಡದಾದ ಮೇಲೆ ಯಾರಾದರೂ ಅತಿಥಿಗಳು ಮನೆಗೆ ಬಂದರೆ `ಹೊಡಿಯಿರಿ, ಕಡಿಯಿರಿ' ಎಂದು ಕಿರುಚಾಡಿದರೆ, ಸಂತ ಸಾಕಿದ್ದ ಗಿಳಿ `ಬನ್ನಿ ಕುಳಿತುಕೊಳ್ಳಿ, ಹಣ್ಣು ತಿನ್ನಿ, ನೀರು ಕುಡಿಯಿರಿ' ಎಂದು ಸತ್ಕಾರದ ಮಾತುಗಳನ್ನಾಡುತ್ತಿತ್ತು. ಅಂದರೆ, ಸಂಸ್ಕಾರದಿಂದ ಬದುಕು ಬದಲಾಗುತ್ತದೆ ಎಂಬುದು ಈ ಕತೆಯ ತಾತ್ಪರ್ಯ.
Vijaya Karnataka Web Image by Joel McGInley from Pixabay
| Representative image | Image by Joel McGInley from Pixabay


ಮನೆಗೆ ಬಂದವರಿಗೆ ಗಿಳಿಗಳು ಬೈದರೆ ಖಂಡಿತಾ ಮುಜುಗರವಾಗುತ್ತದೆ. ಮನಸ್ಸಿಗೆ ನೋವಾಗುತ್ತದೆ. ಸದ್ಯ ಇಲ್ಲೊಂದು ಮೃಗಾಲಯದಲ್ಲಿ ಅಧಿಕಾರಿಗಳು ಇದೇ `ನೋವಿನ' ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಯಾಕೆಂದರೆ, ಇಲ್ಲಿ ಐದು ಗಿಳಿಗಳು ಮೃಗಾಲಯಕ್ಕೆ ಬರುವ ಜನರನ್ನು ಕಂಡು ಅತ್ಯಂತ ಕೆಟ್ಟದಾಗಿ ಬೈಯುವುದನ್ನು ಕಲಿತಿವೆ...! ಹೀಗಾಗಿ, ಈ ಗಿಳಿಗಳನ್ನು ಐಸೋಲೇಷನ್ ಅಥವಾ ಪ್ರತ್ಯೇಕ ವಾಸಕ್ಕೆ ಕಳುಹಿಸಲಾಗಿದೆ.

ಇದು ಯುಕೆಯ ಲಿಂಕನ್ಶೈರ್ ವನ್ಯಜೀವಿ ಉದ್ಯಾನವನದ ಕತೆ. ಆಗಸ್ಟ್‌ 15ರಂದು ಈ ಮೃಗಾಲಯಕ್ಕೆ ಐದು ಆಫ್ರಿಕನ್ ಗಿಳಿಗಳನ್ನು ತರಲಾಗಿತ್ತು. ಇದಾದ ಬಳಿಕ ಈ ಐದು ಗಿಳಿಗಳನ್ನೂ ಒಂದೇ ಕೋಣೆಯಲ್ಲಿ ಇಡಲಾಗಿತ್ತು. ಆದರೆ, ಈ ವೇಳೆ, ಅದ್ಹೇಗೋ ಈ ಎಲ್ಲಾ ಗಿಳಿಗಳು ಒಂದಷ್ಟು ಕೆಟ್ಟ ಶಬ್ದಗಳನ್ನು ಪರಸ್ಪರ ಕಲಿತುಕೊಂಡಿದ್ದವು...! ಮೊದಲು ಮೊದಲು ವನ್ಯಪಾಲಕರು, ಮೃಗಾಲಯದ ಸಿಬ್ಬಂದಿ ಗಿಳಿಗಳ ಈ ಅಸಭ್ಯ ಮಾತುಗಳನ್ನು ತಮಾಷೆಯಂತೆಯೇ ತೆಗೆದುಕೊಳ್ಳುತ್ತಿದ್ದರು. ಆದರೆ, ಕ್ರಮೇಣ ಈ ಗಿಳಿಗಳು ಮೃಗಾಲಯಕ್ಕೆ ಬರುವ ಜನರಿಗೆ ಕೆಟ್ಟದಾಗಿ ಬೈಯ್ಯುವುದಕ್ಕೆ ಶುರು ಮಾಡಿದ್ದವು. ಹೀಗಾಗಿ, ಮೃಗಾಲಯಕ್ಕೆ ಕ್ರಮ ಕೈಗೊಳ್ಳದೆ ವಿಧಿ ಇರಲಿಲ್ಲ.

Also Read : ಮೊದಲ ಬಾರಿಗೆ ತನ್ನದೇ ಹೆಸರು ಹೇಳಿ ಖುಷಿ ಪಟ್ಟ 5 ವರ್ಷದ ಬಾಲಕ! : ಹೇಗಿತ್ತು ಗೊತ್ತಾ ಆ ಸಡಗರ?

`ಒಂದೇ ವಾರದಲ್ಲಿ ಬೇರೆ ಬೇರೆ ದಿನ ಈ ಗಿಳಿಗಳನ್ನು ತಂದಿದ್ದರೂ ಕಾಕತಾಳೀಯವೆಂಬಂತೆ ಈಗಾಗಲೇ ಕೆಲವೊಂದು ಕೆಟ್ಟ ಶಬ್ದಗಳನ್ನು ಕಲಿತಿದ್ದ ಗಿಳಿಗಳನ್ನು ಒಂದೇ ಕೋಣೆಯಲ್ಲಿ ಇಡಲಾಗಿತ್ತು. ಇಲ್ಲಿ ಇವುಗಳು ಪರಸ್ಪರ ಕೆಟ್ಟ ಶಬ್ದಗಳನ್ನು ಮತ್ತಷ್ಟು ಕಲಿತುಕೊಂಡಿದ್ದವು' ಎಂದು ವನ್ಯಜೀವಿ ಉದ್ಯಾನದ ಸಿಇಒ ಸ್ಟೀವ್ ನಿಕೋಲ್ಸ್ ಹೇಳಿದ್ದಾರೆ.

Also Read : ಅಸ್ಥಿಪಂಜರದೊಂದಿಗೆ ಮುದ್ದು ಕಂದನ ಸ್ನೇಹ...! : ಅಚ್ಚರಿಯ ವಿಡಿಯೋ ವೈರಲ್

ಈ ಐದು ಗಿಳಿಗಳನ್ನು ಕೇವಲ 20 ನಿಮಿಷ ಪ್ರಮುಖ ಪ್ರದರ್ಶನದ ಗೂಡಿನಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿಯೇ ಇವುಗಳು ಸಾಕಷ್ಟು ಕೆಟ್ಟ ಶಬ್ದಗಳನ್ನು ಜನರ ಮೇಲೆ ಪ್ರಯೋಗಿಸಿದ್ದವು. ಹೀಗಾಗಿ, ಇವುಗಳನ್ನು ಮತ್ತೆ ಪ್ರತ್ಯೇಕವಾಗಿ ಇಡಲಾಗಿದೆ. ಜೊತೆಗೆ ಈ ಐದು ಗಿಳಿಗಳನ್ನು ಬೇರೆ ಬೇರೆ ವಿಭಾಗಗಳೊಂದಿಗೆ ಬಿಡುವ ಯೋಚನೆಯೂ ಅಧಿಕಾರಿಗಳಿಗೆ ಇದೆ. ಹೀಗಾದಾಗ ಈ ಗಿಳಿಗಳು ಪರಸ್ಪರ ಅಶ್ಲೀಲ ಪದಗಳನ್ನು ಕಲಿಯುವ ಸಾಧ್ಯತೆ ಇಲ್ಲ ಎಂಬುದು ಇಲ್ಲಿನ ಅಧಿಕಾರಿಗಳ ಮಾತು.

Also Read : ಉತ್ತರ ಪ್ರದೇಶ ಯುವಕನ `ಕಪಲ್ ಚಾಲೆಂಜ್‌ಗೆ' ಬಂತು ಹಾಲಿವುಡ್ ನಟಿಯಿಂದ ಪ್ರತಿಕ್ರಿಯೆ...!

ಹಾಗಂತ ಗಿಳಿಗಳು ಹೀಗೆ `ಅಸಭ್ಯ' ವರ್ತನೆ ತೋರುವುದು ಇದೇ ಮೊದಲೇನು ಅಲ್ಲ. 2018ರಲ್ಲಿ ಜೆಸ್ಸಿಯಾ ಎಂಬ ಸಾಕುಗಿಳಿ ತನ್ನ `ಅಶ್ಲೀಲ' ಪದ ಬಳಕೆಯ ಕಾರಣದಿಂದಲೇ ಸುದ್ದಿಯಾಗಿತ್ತು. ಲಂಡನ್‌ನ ತನ್ನ ಮನೆಯಿಂದ ಹಾರಿದ ಈ ಗಿಳಿ ಪಕ್ಕದ ಕಟ್ಟಡವೊಂದರ ಛಾವಣಿಯಲ್ಲಿ ಮೂರು ದಿನ ಕುಳಿತಿತ್ತು. ಈ ವೇಳೆ, ಮಾಲಿಕರಿಗೆ ಇದನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರು ಅಗ್ನಿಶಾಮಕ ದಳದ ಸಹಾಯ ಪಡೆದಿದ್ದರು. ಇತ್ತ, ಗಿಳಿಯ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತೆರಳಿದ್ದ ಸಂದರ್ಭದಲ್ಲಿ ಈ ಗಿಳಿ ಇವರನ್ನು ಅತ್ಯಂತ ಕೆಟ್ಟ ಶಬ್ದಗಳಿಂದ ದಬಾಯಿಸಿತ್ತು...! ಇದು ಸಾಕಷ್ಟು ಸುದ್ದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ