ಆ್ಯಪ್ನಗರ

ಖಾಲಿ ಪಾತ್ರೆಯೊಂದಿಗೆ ಕ್ಲಾಸ್‌ರೂಮಿನತ್ತ ನೋಡುತ್ತಿದ್ದಳು ಬಾಲಕಿ... : ನೋವಿನ ಕತೆಗೆ ಖುಷಿಯ ಕ್ಲೈಮ್ಯಾಕ್ಸ್‌...!

ಒಂದು ಫೋಟೋ, ಒಂದೇ ಒಂದು ಫೋಟೋ ಆ ಬಾಲಕಿಯ ಬದುಕು ಬದಲಾಯಿಸಿತ್ತು. ಹಸಿವು ಎಂದು ನೋಡುತ್ತಿದ್ದ ಬಾಲಕಿಗೆ ಈಗ ಹಸಿವು ನೀಗಿ, ಜ್ಞಾನಾರ್ಜನೆಯ ಖುಷಿಯೂ ಸಿಕ್ಕಿದೆ.

Vijaya Karnataka Web 9 Nov 2019, 5:05 pm
ಆ ಪುಟಾಣಿ ಬಾಲಕಿ ಖಾಲಿ ಪಾತ್ರೆಯೊಂದಿಗೆ ಕ್ಲಾಸ್ ರೂಮಿನೊಳಗೆ ಇಣುಕುತ್ತಿದ್ದಳು... ತನ್ನದೇ ವಯಸ್ಸಿನ ಮಕ್ಕಳು ಕ್ಲಾಸ್ ರೂಮಿನಲ್ಲಿ ಓದಿ ಖುಷಿಪಡುತ್ತಿದ್ದರೆ ಇವಳ ಮನಸ್ಸಿನಲ್ಲೂ ಓದಿನ ನೂರಾರು ಆಸೆ, ಕನಸುಗಳು ಗರಿಬಿಚ್ಚಿದ್ದವು. ಆದರೆ, ಬಡತನ ಈಕೆಗೆ ಶಾಪವಾಗಿತ್ತು... ಇದೇ ಕಾರಣಕ್ಕೆ ಕ್ಲಾಸಿಗೆ ಹೋಗಿ ಇಣುಕುತ್ತಿದ್ದಳು... ಒಂದು ಕಡೆ ಓದಿನ ಕನಸು, ಮತ್ತೊಂದು ಕಡೆ ಹೊಟ್ಟೆ ಹಿಂಡುವ ಹಸಿವು...! ಮಧ್ಯಾಹ್ನದ ಬಿಸಿಯೂಟದಲ್ಲಿ ಉಳಿದ ಅಲ್ಪಸ್ವಲ್ಪ ಅನ್ನವಾದರೂ ತನಗೆ ಸಿಗಬಹುದೇನೋ ಎಂಬ ಆಸೆಯಲ್ಲಿ ಈ ಬಾಲಕಿ ಖಾಲಿ ಪಾತ್ರೆ ಕೈಯಲ್ಲಿ ಹಿಡಿದೇ ಸರ್ಕಾರಿ ಶಾಲೆಯ ಕ್ಲಾಸ್ ರೂಮಿನತ್ತ ದೃಷ್ಟಿ ನೆಟ್ಟಿದ್ದಳು...
Vijaya Karnataka Web classroom
ಖಾಲಿ ಪಾತ್ರೆ ಹಿಡಿದು ನಿಂತಿದ್ದ ಬಾಲಕಿ Image Credit : Venkat Reddy R/facebook


ಬಾಲಕಿಯ ಈ ಅಸಹಾಯಕ ಫೋಟೋವನ್ನು ಅಲ್ಲೇ ಇದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅರೆಕ್ಷಣದಲ್ಲಿ ಈ ಫೋಟೋ ವೈರಲ್ ಆಗಿತ್ತು. ಪರಿಣಾಮ, ಈಗ ಈ ಬಾಲಕಿ ಇದೇ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಹೊಟ್ಟೆ ತುಂಬಾ ಮಧ್ಯಾಹ್ನದ ಊಟವೂ ಸಿಗುತ್ತದೆ, ಓದಿನ ಕನಸೂ ಈಡೇರುತ್ತಿದೆ.


Also Read : ಮೂರು ವರ್ಷಗಳ ಬಳಿಕ ಒಂದಾದ ತಾಯಿ ಮಗ : ಇಲ್ಲಿದೆ ಕಣ್ಣೀರು ತರಿಸುವ ವಿಡಿಯೋ

ಈ ಮನಮುಟ್ಟುವ ಘಟನೆ ನಡೆದಿದ್ದು ಆಂಧ್ರಪ್ರದೇಶದಲ್ಲಿ. ಇಲ್ಲಿನ ಗುಡಿಮಲ್ಕಾಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆರೆಯಾಗಿದ್ದ ಫೋಟೋ ಇದು. ಅಂದು ಖಾಲಿ ಪಾತ್ರೆ ಹಿಡಿದು ಕ್ಲಾಸ್ ರೂಮಿನ ಹೊರಗೆ ನಿಂತಿದ್ದ ಬಾಲಕಿಯ ಹೆಸರು ದಿವ್ಯಾ. ಈ ಶಾಲೆಯ ವಿದ್ಯಾರ್ಥಿನಿಯಲ್ಲದಿದ್ದರೂ ದಿವ್ಯಾ ತಪ್ಪದೇ ಶಾಲೆಗೆ ಬರುತ್ತಿದ್ದಳು. ಕಾರಣ, ಬಿಸಿಯೂಟದ ಅಳಿದುಳಿದ ಆಹಾರ ಸಿಗಬಹುದು ಎಂಬ ಆಸೆ.


Also Read : 34 ವರ್ಷವಾದರೂ ಮಗುವಂತೆ ಕಾಣುವ ವ್ಯಕ್ತಿ...! : ಕಾರಣ ಏನು ಗೊತ್ತಾ...?

ದಿವ್ಯಾಳ ತಂದೆ ಪೌರಕಾರ್ಮಿಕ. ತಾಯಿ ಕೂಡಾ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರು. ಸ್ಲಮ್‌ನಲ್ಲಿ ಇವರ ವಾಸ. ಮನೆಯಲ್ಲಿ ಹೊದ್ದು ಮಲಗಿದ ಬಡತನ. ಹೀಗಾಗಿ, ತಂದೆ ತಾಯಿ ಕೆಲಸಕ್ಕೆ ಹೋದ ಬಳಿಕ ದಿವ್ಯಾ ಶಾಲೆಗೆ ಬರುತ್ತಿದ್ದಳು. ಈಕೆ ಫೋಟೋವನ್ನು ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‌ಜಿಓ ಒಂದರ ಸದಸ್ಯ ವೆಂಕಟ ರೆಡ್ಡಿ ಎಂಬವರು ಸೆರೆ ಹಿಡಿದಿದ್ದರು. ಜೊತೆಗೆ `ಮಕ್ಕಳಿಗೆ ಈಗಲೂ ಸರಿಯಾಗಿ ಊಟ ಮತ್ತು ಶಿಕ್ಷಣ ಸಿಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ ಹಾಕಿದ್ದರು ಮತ್ತು ಮಾಧ್ಯಮಗಳಿಗೂ ಈ ಫೋಟೋ ನೀಡಿದ್ದರು. ಹೀಗಾಗಿ, ಪತ್ರಿಕೆಯಲ್ಲೂ ಈ ಫೋಟೋ ಪ್ರಕಟವಾಗಿತ್ತು. ಇದಾದ ಬಳಿಕ ತಮ್ಮ ಎನ್‌ಜಿಓ ಮತ್ತು ಇತರ ಸಂಘಟನೆಗಳ ಸಹಾಯದಿಂದ ವೆಂಕಟ ರೆಡ್ಡಿ ದಿವ್ಯಾಳನ್ನು ಅದೇ ಶಾಲೆಗೆ ಸೇರಿಸಿದ್ದಾರೆ.


Also Read : ಈ ಕೋಟೆಯೊಳಗೆ ರಾತ್ರಿ ಹೋದವರು ಯಾರೂ ವಾಪಸ್ ಬಂದಿಲ್ಲವಂತೆ...!

ವಿದ್ಯಾರ್ಥಿನಿಯಾಗಿ ಶಾಲೆಗೆ ಸೇರಿದ ಬಳಿಕ ದಿವ್ಯಾ ತುಂಬಾ ಖುಷಿಯಾಗಿದ್ದಾಳೆ ಎಂದೂ ವೆಂಕಟ ರೆಡ್ಡಿ ತನ್ನ ಇನ್ನೊಂದು ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ. ಸಮಾನ ಮನಸ್ಕರ ಒಂದು ಪ್ರಯತ್ನ ಈಗ ಬಾಲಕಿಯೊಬ್ಬಳ ಬಾಳು ಬೆಳಗಿದೆ... ಊಟದ ಜೊತೆಗೆ ದಿವ್ಯಾಳ ಜ್ಞಾನದ ಹಸಿವು ಕೂಡಾ ನೀಗುತ್ತಿದೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ