ಸೂಪರ್ ಐಡಿಯಾ...!
| Screengrab from video | Courtesy : chunghannie/instagram
ಕೊರೊನಾ ವೈರಸ್ ಭಯದಿಂದ ಬಹುತೇಕರು ಈಗ ಮನೆಯಿಂದ ಹೊರಗೆ ಬರುತ್ತಲೇ ಇಲ್ಲ. ಆ ಪರಿ ಈ ರಕ್ಕಸ ವೈರಸ್ ಎಲ್ಲರಲ್ಲೂ ತಲ್ಲಣ ಸೃಷ್ಟಿಸಿದೆ. ಅಂತೆಯೇ ದಕ್ಷಿಣ ಕ್ಯಾಲಿಫೋರ್ನಿಯಾದ ಹುನ್ನಾ ಚುಂಗ್ ಎಂಬ ಈ ಯುವತಿಯೂ ಮನೆಯಿಂದ ಆಚೆ ಬಂದಿರಲಿಲ್ಲ. ಆದರೆ, ಇದೇ ಪ್ರತ್ಯೇಕ ವಾಸದ ಅವಧಿಯಲ್ಲೇ ಈಕೆಯ ಭಾವೀ ಪತಿಯ ಹುಟ್ಟುಹಬ್ಬದ ದಿನವೂ ಬಂದಿತ್ತು. ಆದರೆ, ಅದ್ಧೂರಿಯಾಗಿ ಬರ್ತ್ಡೇ ಆಚರಿಸುವಂತಿರಲಿಲ್ಲ. ಹೀಗಾಗಿ, ಹೇಗಪ್ಪಾ ಗೆಳೆಯನಿಗೆ ವಿಶ್ ಮಾಡುವುದು ಎಂದು ಟೆನ್ಷನ್ನಲ್ಲಿದ್ದ ಹುನ್ನಾ ಚುಂಗ್ ಅದೊಂದು ಐಡಿಯಾ ಮಾಡಿದ್ದಳು. ಈ ಐಡಿಯಾ ಈಗ ಸಖತ್ ವರ್ಕೌಟ್ ಆಗಿದೆ. ಜೊತೆಗೆ, ಈಕೆಯ ಸೃಜನಶೀಲ ಮಾರ್ಗವನ್ನು ಎಲ್ಲರೂ ಕೊಂಡಾಡಿದ್ದಾರೆ. ಇಷ್ಟಕ್ಕೂ ಆಕೆ ಮಾಡಿದ್ದೇನು ಎಂದರೆ ತನ್ನ ಬಿಲ್ಡಿಂಗ್ನ ಎಲ್ಲಾ ಮನೆಗಳಿಗೆ ತನ್ನ ಭಾವೀ ಪತಿಯ ಹುಟ್ಟುಹಬ್ಬದ ವಿಷಯವನ್ನು ವಿಸ್ತಾರವಾಗಿ ಚೀಟಿಯಲ್ಲಿ ಬರೆದು ಆ ಚೀಟಿಯನ್ನು ಪ್ರತೀ ಮನೆಯ ಬಾಗಿಲಿನ ಒಳಗೆ ಹಾಕಿದ್ದಳು. ಅಂತೆಯೇ ಹುಟ್ಟುಹಬ್ಬದ ದಿನ ಹುನ್ನಾ ಚುಂಗ್ ಭಾವೀ ಪತಿ ತನ್ನ ಕಿಟಕಿ ಬಾಗಿಲು ತೆರೆದಾಗ ಅಪಾರ್ಟ್ಮೆಂಟ್ನ ಎಲ್ಲರೂ `ಹ್ಯಾಪಿ ಬರ್ತ್ಡೇ' ಎಂದು ಜೋರಾಗಿಯೇ ಹೇಳಿದ್ದರು... ಇದನ್ನು ಕಂಡು ಆ ಯುವಕನ ಖುಷಿಗೆ ಪಾರವೇ ಇರಲಿಲ್ಲ...!
ಹುಟ್ಟುಹಬ್ಬದ ಸರ್ಪ್ರೈಸ್ ವಿಡಿಯೋ
ಈ ಪ್ರೀತಿಗೆ ಎಲ್ಲರೂ ಫಿದಾ...
| Screengrab from video | Courtesy : Jennifer Schneff Williamson/Facebook
ಇದು ಕೂಡಾ ಹೃದಯಸ್ಪರ್ಶಿ ಕತೆ. ಒಲಿವಿಯಾ ಗ್ರೇಸ್ ವಿಲಿಯಮ್ಸನ್ ಎಂಬ ಪುಟಾಣಿ ತನ್ನ ಐದನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿದ್ದಳು. ಆದರೆ, ಈ ರಕ್ಕಸ ಕೊರೊನಾ ವೈರಸ್ ಅವಳ ಖುಷಿಯನ್ನೇ ನುಂಗಿತ್ತು. ಯಾಕೆಂದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇವಳ ಹುಟ್ಟುಹಬ್ಬ ಆಚರಿಸಲು ಸಾಧ್ಯವಿರಲಿಲ್ಲ. ಇದು ಗೊತ್ತಾಗುತ್ತಿದ್ದಂತೆಯೇ ಒಲಿವಿಯಾ ಗ್ರೇಸ್ ವಿಲಿಯಮ್ಸನ್ ಅತ್ತು ಅತ್ತು ಸುಸ್ತಾಗಿದ್ದಳು. ಹೀಗಾಗಿ, ಮಗಳ ನೋವನ್ನು ಕಂಡು ದುಃಖಿತರಾಗಿದ್ದ ಹೆತ್ತವರು ಅಕ್ಕಪಕ್ಕದವರಲ್ಲಿ `ಡ್ರೈವ್ ಥ್ರೂ ಪರೇಡ್' ಮೂಲಕ ಹುಟ್ಟುಹಬ್ಬದ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಐಡಿಯಾ ನೆರೆಹೊರೆಯವರಿಗೂ ಇಷ್ಟವಾಗಿತ್ತು. ಒಲಿವಿಯಾ ಕೂಡಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಳು. ಈ ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್ ಆಗುತ್ತಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ : Click Here
ಇದಲ್ವಾ ನಿಜವಾದ ಪ್ರೀತಿ...?
| Screengrab from video | Courtesy : instagram/justinbaldoni/
ಅವರಿಬ್ಬರು ವೃದ್ಧ ದಂಪತಿ. ಆದರೆ, ಕೊರೊನಾ ವೈರಸ್ ಕಾರಣಕ್ಕೆ ಅವರಿಬ್ಬರು ದೂರವಾಗಿದ್ದಾರೆ. ಹಾಗಂತ, ಪ್ರೀತಿಯಂತೂ ಕಡಿಮೆಯಾಗಿಲ್ಲ. ವೃದ್ಧೆ ಅಲ್ಝೈಮರ್ ಅಂದರೆ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೊರೊನಾ ವೈರಸ್ ಕಾಟ ಶುರುವಾದಾಗಿನಿಂದ ಆಸ್ಪತ್ರೆಗೆ ಯಾರಿಗೂ ಭೇಟಿ ನೀಡಲು ಅವಕಾಶವಿಲ್ಲ. ಹೀಗಾಗಿ, ಪ್ರತಿದಿನ ಈ ವೃದ್ಧೆಯ ಪತಿ ಕಿಟಕಿಯ ಗ್ಲಾಸ್ ಬಳಿ ಬಂದು ಪತ್ನಿಯೊಂದಿಗೆ ಮಾತನಾಡಿಕೊಂಡು ಹೋಗುತ್ತಾರೆ. ಟಿಕ್ಟಾಕ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಹೃದಯವನ್ನೂ ಕರಗಿಸುತ್ತಿದೆ. ಈ ಮಧುರ ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಅದ್ಭುತ ಪ್ರೀತಿ...
ಡೈನೋಸರ್ ವೇಷ ತೊಟ್ಟು ಸಂಚಾರ...!
| Image Credit : instagram/cruise_fly_repeat/
ಕೊರೊನಾ ಕಾಟ ಶುರುವಾದಾಗಿನಿಂದ ಈ ವೈರಸ್ನಿಂದ ಪಾರಾಗಲು ಜನ ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲೂ ಕೆಲವರು ಡೈನೋಸರ್ ವೇಷ ತೊಟ್ಟು ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇಲ್ಲೊಬ್ಬರು ವ್ಯಕ್ತಿ ಡೈನೋಸರ್ ವೇಷ ತೊಟ್ಟು ಏರ್ಪೋರ್ಟ್ಗೆ ಬಂದಿದ್ದರು. ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಯಾದ ದೃಶ್ಯವಿದು. ಸದ್ಯ ಈ ವಿಡಿಯೋವನ್ನು ಇನ್ಸ್ಟ್ರಾಗ್ರಾಂನಲ್ಲಿ ಶೇರ್ ಮಾಡಲಾಗಿದೆ. ಈ ಹಿಂದೆಯೂ ಇಂತಹ ಹಲವು ವಿಡಿಯೋಗಳು ವೈರಲ್ ಆಗಿತ್ತು. ಮಹಿಳೆಯೊಬ್ಬರು ಜಿರಾಫೆ ವೇಷ ತೊಟ್ಟು ಆಸ್ಪತ್ರೆಗೆ ಬಂದಿದ್ದರೆ, ಮತ್ತೊಬ್ಬರು ಇದೇ ರೀತಿ ಡೈನೋಸರ್ ವೇಷ ತೊಟ್ಟು ಓಡಾಡಿದ್ದರು. ಈಗ ಈ ವಿಡಿಯೋ ಕೂಡಾ ನೆಟ್ಟಿಗರ ಗಮನ ಸೆಳೆದಿದೆ.