ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 'ಪ್ಯಾಟೆ ಹುಡ್ಗು ಹಳ್ಳಿ ಲೈಫು ಸೀಸನ್ 4’ ರಿಯಾಲಿಟಿ ಖ್ಯಾತಿಯ ಮೆಬೀನಾ ಮೈಕಲ್ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ರಾಜು, ಮೆಬೀನಾ ಅವರ ಸ್ನೇಹಿತ ವಿನೋದ್ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಪ್ರಯಾಣಿಸುತ್ತಿದ್ದ ಕಾರು, ಸಂಜೆ 4:30ರ ಸಮಯದಲ್ಲಿ ದೇವಿಹಳ್ಳಿ ಬಳಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಟ್ರ್ಯಾಕ್ಟರ್ ನ ಟ್ರೈಲರ್ ಗೆ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಮೂವರನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಮೆಬೀನಾ ಅವರು ಕೊನೆಯುಸಿರೆಳೆದಿದ್ದಾರೆ.
ಮೆಬೀನಾ ಅವರು ಖಾಸಗಿ ವಾಹಿನಿ ನಡೆಸುತ್ತಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನ ಸೀಜನ್ -4ರ ವಿನ್ನರ್ ಆಗಿದ್ದರು.
ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದ ಇವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು.
ಸಿಟಿ ಲೈಫನ್ನು ಎಂಜಾಯ್ ಮಾಡಿಕೊಂಡಿದ್ದ ಹುಡುಗಿಯರನ್ನು ಯಾವುದೇ ಸೌಲಭ್ಯ ನೀಡದೇ ಹಳ್ಳಿಯಲ್ಲಿ ವಾಸ ಮಾಡೋಕೆ ಬಿಡುವುದು, ಆ ಸವಾಲಿನಿಂದ ಅವರು ಹೇಗೆ ಗೆದ್ದು ಬರಲಿದ್ದಾರೆ ಎಂಬುದು ಈ ಶೋನ ಟಾಸ್ಕ್ ಆಗಿರುತ್ತದೆ.
ಮೆಬೀನಾ ಮೈಕಲ್, ಅಭಿಜ್ಞಾ ಭಟ್, ಪ್ರಿಯಾಂಕಾ ಶಹಾನ್ ಪೂನಮ್ ಸೇರಿ 12 ಜನ ಸ್ಪರ್ಧಿಗಳು ಸೀಸನ್ 4ರಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಮೆಬಿನಾ ಮೈಕೆಲ್ ವಿನ್ನರ್ ಆಗಿದ್ದರು. ಅವರಿಗೆ 7 ಲಕ್ಷ ರೂ. ಬಹುಮಾನ ನೀಡಲಾಗಿತ್ತು.