'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್-ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯಗೊಂಡಿದ್ದು, ಇದೀಗ ತೆರೆಗೆ ಬರುವುದಕ್ಕೆ ಸಜ್ಜಾಗಿದೆ ಈ ಸಿನಿಮಾ. ಈಚೆಗೆ ಸುಮಾರು 200ಕ್ಕೂ ಹೆಚ್ಚು ತಂತ್ರಜ್ಞರಿಂದ ಚಿತ್ರಕ್ಕೆ ರೀ-ರೆಕಾರ್ಡಿಂಗ್ ನಡೆದಿದೆ. ಧರ್ಮವಿಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತ ನಗರಗಳ ಪ್ರಸಿದ್ದ ಸ್ಟುಡಿಯೋಗಳಲ್ಲಿ ಈ ಚಿತ್ರದ ರೀರೆಕಾರ್ಡಿಂಗ್ ನಡೆದಿರುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ದೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾಗಿರುವ ರಾಮು 'ಅರ್ಜುನ್ ಗೌಡ' ಚಿತ್ರಕ್ಕೆ ಹಣ ಹಾಕಿದ್ದಾರೆ. 80ಕ್ಕೂ ಹೆಚ್ಚು ನುರಿತ ತಂತ್ರಜ್ಞರಿಂದ ಸಿ.ಜಿ. ಕೆಲಸ ಕೂಡ ಮುಗಿಸಲಾಗಿದೆ. ಸರಿಯಾದ ಸಮಯ ನೋಡಿಕೊಂಡು ರಿಲೀಸ್ ಮಾಡುವುದಕ್ಕೆ ನಿರ್ಮಾಪಕ ರಾಮು ಪ್ಲ್ಯಾನ್ ಮಾಡಿಕೊಂಡಿದ್ದಾರೆ.